Hosea 1

ಹೋಶೇಯನ ಪತ್ನಿಯ ಪತಿದ್ರೋಹ

1ಯೆಹೂದದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ, ಇವರ ಕಾಲದಲ್ಲಿ, ಅಂದರೆ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ಕಾಲದಲ್ಲಿ ಬೆಯೇರಿಯ ಮಗನಾದ ಹೋಶೇಯನಿಗೆ ಯೆಹೋವನು ತನ್ನ ವಾಕ್ಯವನ್ನು ದಯಪಾಲಿಸಿದನು.

ಹೋಶೇಯನ ಮದುವೆ ಮತ್ತು ಮೂವರು ಮಕ್ಕಳು ಜನಿಸಿದ್ದು

2 ಯೆಹೋವನು ಹೋಶೇಯನ ಸಂಗಡ ಮೊದಲು ಮಾತನಾಡಿದಾಗ ಆತನು ಅವನಿಗೆ, <<ನೀನು ಹೋಗಿ ಒಬ್ಬ ವ್ಯಭಿಚಾರಿಣಿಯನ್ನು ಮದುವೆಮಾಡಿಕೊಂಡು ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ.
ಏಕೆಂದರೆ, ದೇಶವು ನನ್ನನ್ನು ಬಿಟ್ಟು ಅಧಿಕ ವ್ಯಭಿಚಾರವನ್ನು ನಡೆಸುತ್ತದೆ ಎಂಬುದಕ್ಕೆ ಇದು ದೃಷ್ಟಾಂತವಾಗಿರಲಿ>> ಎಂದು ಹೇಳಿದನು.

3

ಅದರಂತೆ ಹೋಶೇಯನು ಹೋಗಿ ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ಕೊಟ್ಟಳು.

4 ಯೆಹೋವನು ಅವನನ್ನು ಕುರಿತು, <<ಈ ಮಗುವಿಗೆ ಇಜ್ರೇಲ್ ಎಂಬ ಹೆಸರಿಡು; ಇಜ್ರೇಲಿನಲ್ಲಿ ಸುರಿಸಿದ ರಕ್ತಕ್ಕೆ ಪ್ರತಿಯಾಗಿ ಸ್ವಲ್ಪ ಕಾಲದೊಳಗೆ ನಾನು ಯೇಹು ವಂಶದವರಿಗೆ ಮುಯ್ಯಿ ತೀರಿಸಿ ಇಸ್ರಾಯೇಲ್ ಜನಾಂಗವನ್ನು ನಿರ್ನಾಮ ಮಾಡುವೆನು.
5 ಆ ದಿನದಲ್ಲಿ ನಾನು ಇಜ್ರೇಲ್ ತಗ್ಗಿನೊಳಗೆ ಇಸ್ರಾಯೇಲಿನ ಬಿಲ್ಲನ್ನು ಮುರಿದುಬಿಡುವೆನು>> ಎಂದನು.

6

ಗೋಮೆರಳು ಪುನಃ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಯೆಹೋವನು ಹೋಶೇಯನಿಗೆ, <<ಈ ಮಗುವಿಗೆ <ಲೋ ರುಹಾಮ> ಎಂಬ ಹೆಸರಿಡು; ಏಕೆಂದರೆ ನಾನು ಇಸ್ರಾಯೇಲ್ ವಂಶದವರಲ್ಲಿ ಇನ್ನು ವಾತ್ಸಲ್ಯವಿಡುವುದಿಲ್ಲ, ಅವರನ್ನು ಕ್ಷಮಿಸುವುದಿಲ್ಲ.

7 ಆದರೆ ನಾನು ಯೆಹೂದ ವಂಶದವರಲ್ಲಿ ವಾತ್ಸಲ್ಯವಿಟ್ಟು ಅವರನ್ನು ಉದ್ಧರಿಸುವೆನು. ಬಿಲ್ಲು, ಕತ್ತಿ, ಕಾಳಗ, ಕುದುರೆ, ರಾಹುತರ, ಮೂಲಕವಲ್ಲ, ಅವರ ದೇವರಾದ ಯೆಹೋವನ ಬಲದಿಂದಲೇ ಅವರನ್ನು ರಕ್ಷಿಸುವೆನು>> ಅಂದನು.

8

ಆ ಕೂಸು ಮೊಲೆ ಬಿಟ್ಟ ಮೇಲೆ ಅವಳು ಪುನಃ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದಳು.

9 ಆಗ ಯೆಹೋವನು, <<ಈ ಮಗುವಿಗೆ <ಲೋ ಅಮ್ಮಿ> ಎಂಬ ಹೆಸರಿಡು; ಏಕೆಂದರೆ ನೀವು ನನ್ನ ಪ್ರಜೆಯಲ್ಲ, ನಾನು ಇನ್ನು ನಿಮ್ಮ ದೇವರಲ್ಲ>> ಎಂದನು.

ಇಸ್ರಾಯೇಲಿನ ಮುಂದಿನ ಸುಸ್ಥಿತಿ


10

ಇಸ್ರಾಯೇಲರ ಸಂಖ್ಯೆಯು ಅಳೆಯುವುದಕ್ಕೂ, ಲೆಕ್ಕಿಸುವುದಕ್ಕೂ ಅಸಾಧ್ಯವಾದ ಸಮುದ್ರತೀರದ ಮರಳಿನಂತಾಗುವುದು.

ಆಗ ಅವರು ನನ್ನ ಪ್ರಜೆಯಲ್ಲ ಎನಿಸಿಕೊಳ್ಳುವುದಕ್ಕೆ ಬದಲಾಗಿ ಜೀವಸ್ವರೂಪನಾದ ದೇವರ ಮಕ್ಕಳು ಎನಿಸಿಕೊಳ್ಳುವರು.
11 ಯೆಹೂದ್ಯರು ಮತ್ತು ಇಸ್ರಾಯೇಲರೂ ಒಟ್ಟುಗೂಡಿ ಒಬ್ಬನನ್ನೇ ಶಿರಸ್ಸನ್ನಾಗಿ ಮಾಡಿಕೊಂಡು ದೇಶದೊಳಗಿಂದ ಹೊರಡುವರು; ಇಜ್ರೇಲಿನ ಸುದಿನವು ಅತಿವಿಶೇಷವಾದದ್ದು.

Copyright information for KanULB